Wednesday, February 17, 2010

ನಾಮಬಲವೆಂಬ ಹೆಸರು

ಹೆಸರಲ್ಲೇನಿದೆ ಬಿಡ್ರಿ ಅಂತ ಮುಂಗಾರುಮಳೆಯ ಕ್ಲೈಮಾಕ್ಸ್ ನಲ್ಲಿ ಗಣೇಶ ದಿಗಂತ್ ಗೆ ಹೇಳಿದಾಗ, ಹೌದಲ್ಲ ಅದರಲ್ಲೇನಿ ಅಂತ ಅನಿಸಿದ್ದರೂ ಆತ ಅವನ ಹೆಸರನ್ನು ಹೇಳಿದ್ದರೆ ಪ್ರೇಕ್ಷಕರ ನಿರೀಕ್ಷೆಯೇ ಬೇರೆಯಾಗುತ್ತಿತ್ತೇನೋ. ಒಳ್ಳೆ ಹೆಸರು ಯಾರಿ ಯಾವುದಕ್ಕೆ ಬೇಡ. ಹುಟ್ಟಿದ ಮಗು, ಹರಿಯುವ ನದಿ, ಕಟ್ಟಿದ ಕಟ್ಟಡ, ತಿನ್ನುವ ಹೊಟೆಲ್, ನಡೆದಾಡುವ ಫುಟ್ ಪಾತ್, ಓಡಾಡುವ ರಸ್ತೆ, ತಿರುಗದ ಸರ್ಕಲ್, ಸರ್ಕಾರದ ಮುಗಿಯದ ಯೋಜನೆ ಮತ್ತು ಅದೃಷ್ಟವಶಾತ್ ಮುಗಿದ ಯೋಜನೆ, ಹೊಸ ಸಿನೆಮಾ, ಹೊಸನಟ ನಟಿ. ... ಅಬ್ಬಬ್ಬಾ ಏನ್ರೀ ಇದು ಎಲ್ಲಕ್ಕೂ ಹೆಸರು ಬೇಕೇ ಬೇಕು. ಬಾಹ್ಯಾಕಾಶಕ್ಕೆ ಹಾರುವ ಸೆಟಲೈಟ್ ನಿಂದ ಹಿಡಿದು ಕಾಲ ಬಳಿ ಬಂದು ಮಲಗುವ ನಾಯಿ, ಬೆಕ್ಕಿಗಳಿಗೂ ಒಂದೊಂದು ಹೆಸರು. ಆದರೆ ಇತ್ತೀಚೆಗಂತೂ ಹುಟ್ಟುದ ಮಗುವಿಗೆ ಹೆಸರಿಡಲು ಪಡುವ ಕಷ್ಟಪಾಡು. ಅವರು ಮಕ್ಕಳನ್ನು ಮಾಡಿಕೊಳ್ಳಲು ಅಷ್ಟು ಕಷ್ಟಪಟ್ಟಿರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಆ ಮಗುವಿಗೆ ಹೆಸರಿಡಲು ತುಂಬಾ ಕಷ್ಟಪಟ್ಟಿರುತ್ತಾರೆ. ಅದು ಹಳೆ ಹೆಸರಾಯ್ತು, ನಮ್ಮಕ್ಕನ ಮಗನಿಗೇ ಅದೇ ಹೆಸರು, ಸ್ವಲ್ಪ change ಇರಬೇಕು, ಚೆನ್ನಾಗಿರಬೇಕು.. ಅಯ್ಯೋ ಏನ್ರೀ ಇದು ಇರೋ ಒಂದು ಮಗುವಿಗೆ ಹೆಸರಿಡಬೇಕಾದರೆ ಇಷ್ಟೊಂದು ತಲೆ ಕೆಡೆಸಿಕೊಂಡಿದ್ದೀರಲ್ಲ...ಅಂತ ಅನ್ನೋಣವೆಂದರೆ ಪಾಪ....ಕುಟುಂಬ ಯೋಜನೆ ಅಲ್ಲದಿದ್ದರೂ ಈಗಿನ ಪರಿಸ್ಥಿತಿಗೆ ಎಲ್ಲರೂ ಒಂದೇ ಮಗು ಮಾಡಿಕೊಂಡಿರುತ್ತಾರೆ. ಏನೇ R & D ಅಂತ ಮಾಡಿದರೂ ಅದರ ಮೇಲೆ. ಪಾಪ ಯಾಕೆಂದರೆ ಅದರ ಅಪ್ಪ ಅಮ್ಮ ಹುಟ್ಟಿದಾಗ ಮನೆತುಂಬ ಮಕ್ಕಳು. ಎಲ್ಲದಕ್ಕೂ ಒಂದೊಂದು ದೇವರ ಹೆಸರು. ಆದರೆ ಆ ದೇವರ ಹೆಸರು ಮಕ್ಕಳು ಮುಂದೆ ದೇವರ ನಂಬಿಕೆಯನ್ನು ಕಳೆದುಕೊಂಡೋ ಅಥವಾ ಇನ್ಯಾವುದೇ fashionಗೆ ಬಿದ್ದು ತಮ್ಮ ಮಕ್ಕಳಿಗೆ ವಿಚಿತ್ರ ಹೆಸರುಗಳನ್ನು ಇಡುವುದು ಎಲ್ಲಾ ವಿಚಿತ್ರ. ಎಷ್ಟು ವಿಚಿತ್ರ ಅಂದರೆ ನನಗೆ ತಿಳಿದ ಮಟ್ಟಿಗೆ ಒಬ್ಬ ಸೈನ್ಸ್ ಫ್ರೊಫೆಸರ್ ತಮ್ಮ ಮಗನಿಗೆ ಪ್ರೋಟಾನ್ ಎಂದು ಹೆಸರಿಟ್ಟಿದ್ದು. ಬಹುಶಃ ಮುಂದಿನ ತಲೆಮಾರಿನ ಹೊತ್ತಿಗೆ ಎಲ್ಲಾ ಹೆಸರುಗಳೂ ಖಾಲಿಯಾದ ಮೇಲೆ ಆಗ ನಾ ವಿಚಿತ್ರವೆಂದು ಹೇಳಿದ ಪದ ಕೂಡಾ ಯಾರಿಗೂ ನಾಮಕರಣವಾಗಬಹುದು ಗೊತ್ತಿಲ್ಲ.

ಹೀಗೆ ಹೆಸರಿನ ಬಗ್ಗೆ ಬರೆಯುತ್ತಾ ಹೋದರೆ ಒಂದು ಪುಸ್ತಕ ಬರೆಯಬಹುದು. ಹೆಸರಿಗೆ ಒಂದು ತೂಕ ಬರುವುದು ಯಾವುದೋ ಜ್ಯೋತಿಷಿ ಹೇಳಿದ ನಾಮಬಲದಿಂದ ಅಲ್ಲ. ಆ ವ್ಯಕ್ತಿಯ ಕಾರ್ಯ ಆತನ ವ್ಯಕ್ತಿತ್ವ ಮತ್ತು ಆತನ/ಆಕೆಯ ಸಾಧನೆ ತದನಂತರ ನಿಮ್ಮ ಹೆಸರು ಪ್ರಸಿದ್ದ ಆಗುವುದು. ಇದು ನನ್ನ ಅನಿಸಿಕೆ. ಇಷ್ಟೊಂದು ಹೆಸರಿನ ಬಗ್ಗೆ ಯೋಚನೆ ಯಾಕೆ ಬಿಡ್ರಿ. ನಿಮ್ಮ ನಿಮ್ಮ ಹೆಸರು ಚೆನ್ನಾಗಿದೆಯೇ ನೋಡಿಕೊಳ್ಳಿ. ಕಾರ್ಯ, ವ್ಯಕ್ತಿತ್ವ, ಸಾಧನೆ ಇವು ಯಾವು ಕೂಡ ಆಗಲಿಲ್ಲವೆಂದರೆ, ಚಿಂತಿಸಬೇಡಿ.. ನಿಮಗೆ ಯಾರಿಗೂ ಮಕ್ಕಳು ಆಗಿಲ್ಲವಾದರೆ ಮುಂದೆ ಅವು ಬರುತ್ತವಲ್ಲ ಆಗ as usually ಅವುಗಳ ಮೇಲೆ ಈ ಹೆಸರನ್ನಿಡುವ experiment ಮಾಡೋಣ ಅಷ್ಟೆ...ಅಂದ ಹಾಗೆ ನಿಮ್ಮ ಹೆಸರು ಚೆನ್ನಾಗಿ ಇದೆ ತಾನೆ ?

Monday, February 8, 2010

ತುಂಟ ಹುಡುಗ ನಮ್ಮ ಅಕ್ಕನ ಮಗ

ನನ್ನ ಅಕ್ಕನ ಮಗ ಬಹಳ ತುಂಟ. ಅಕ್ಕನ ಮನೆ ಹತ್ತಿರದಲ್ಲಿರುವುದರಿಂದ ಅವಳಿಗೆ ಬೇಜಾರಾದಾಗ ಅಥವಾ ಮಗನಿಗೆ ರಜಾ ಸಿಕ್ಕಿದಾಗ ನಮ್ಮ ಮನೆಗೆ ಬರುವುದು ರೂಢಿ. ಅವನು ನಮ್ಮ ಮನೆಗೆ ಬಂದರೆ ನಮ್ಮಮ್ಮನಿಗೆ ಪ್ರಾಣಸಂಕಟ. ಯಾಕೆಂದರೆ ಅಡುಗೆಮನೆಯ ಚಮಚ ತಟ್ಟೆಯಿಂದ ಹಿಡಿದು ಮನೆಯ ಟಿ.ವಿ.ರಿಮೋಟ್, ಕೊನೆಗೆ ನಮ್ಮಪ್ಪನ ಮೊಬೈಲ್ ಫೋನ್ ಕೂಡ ಅವನ ವಿಜ್ಞಾನಿಯಂತಹ ತಲೆಗೆ ಆಟಿಕೆ ವಸ್ತುಗಳಾಗಿ ಎಲ್ಲವನ್ನೂ ಬಿಚ್ಚಿ, ಬಿಡಿಸಿ, ಕೂಡಿಸಿ, ಕಳೆದು, ಉಲ್ಟಾ ಸೀದಾ ಹೀಗೆ ಅವನ ಆ ತಲೆಗೆ ಏನೇನು ಬರುವುದು ಯಾವುದರಲ್ಲಿ ಅವನಿಗೆ ಅದಿನ್ಯಾವ ಮಾಹಿತಿ ಸಿಗುವುದೋ ನಾ ಕಾಣೆ.

ಆದರೆ ಪಾಪ ಸುಖಾಸುಮ್ಮನೆ ಬಲಿಪಶುಗಳಾಗುವುದು ನಮ್ಮ ಮನೆಯ ವಸ್ತುಗಳು. ನನಗೂ ಅವನಿಗೂ ಏನೋ ಒಂದು ತರಹ ಜುಗಲ್ಬಂದಿ. ಅವನ ಕಾರ್ಯ ಚಟುವಟಿಕೆಗಳನ್ನು ನಾನು ಪ್ರೋತ್ಸಾಹಿಸುವುದು. ನಂತರ ಅವನನ್ನು ಕಂಟ್ರೋಲ್ ಮಾಡಲು ಆಗುವುದಿಲ್ಲವೆಂದು ನನ್ನಕ್ಕನ ತಕರಾರು . ಅವಳ ಈ ವಾದವನ್ನು ನಾನು ಮತ್ತು ಅವನು ಬೈಕ್ ನಲ್ಲಿ ಸುತ್ತುತ್ತಾ ಅವನಿಗೆ ಕೇಳಿದ್ದನ್ನೆಲ್ಲಾ ನಾನು ಕೋಡಿಸುತ್ತಾ.. ತಿನ್ನಿಸುತ್ತಾ ಬೇಕಾದ ಸಾಕ್ಷ್ಯಾಧಾರಗಳನ್ನು ಒದಗಿಸುತ್ತೇವೆ. ಆದರೆ ಕೆಲವೊಮ್ಮೆ ಅವನು ಈಗಿನ ಪಳಗಿದ ರಾಜಕಾರಣಿಗಳಂಅಹ ನನ್ನ ಈ ಒಳ್ಳೆತನವನ್ನು misuse ಮಾಡಿಕೊಂಡದ್ದು ಉಂಟು. ಆಗ ಅವನಿಗೆ ನನ್ನಕ್ಕನಿಂದ ಪಟೀರ್ ಎಂದು ಹೊಡೆತ. As usual ಸಮಾಧಾನ ಮಾಡಲು ಅವನ್ನಜ್ಜನ ಸನ್ನಿಧಾನ. ಕೆಲವೊಮ್ಮೆ ಆತ ಮಾಡುವ ತುಂಟಾಟಗಳು ಎಷ್ಟು ಅತಿರೇತಕ್ಕೆ ಹೋಗುತ್ತೆಂದರೆ ಒಂದು ಸಾರಿ ನಮ್ಮಮ್ಮ , ಅಕ್ಕ ರೂಮ್ ನಲ್ಲಿ ಏನೋ ಮಾತಾಡುತ್ತಾ ಕುಳಿತಿದ್ದಾರೆ. ರೂಮಿನ ಒಳಗೆ ಅವರ ಜೊತೆ ಆಟವಾಡುತ್ತಾ ಇದ್ದವನು ರೂಮ್ ಬಾಗಿಲನ್ನು ಹಾಕಿಕೊಂಡು ಅವನ ಕೈಗೆ ಸಿಗುವ ರೂಮ್ ಕೀಯನ್ನು ಹಾಕಿ ಎಲ್ಲೋ ಎಸೆದಿದ್ದಾನೆ. ಇದ್ಯಾವುದರ ಪರಿವೆ ಇಲ್ಲದ ನಮ್ಮಕ್ಕ, ನಮ್ಮಮ್ಮ ಮಾತು ಮುಗಿಸಿ ಹೊರಗೆ ಬರಲು ಬಾಗಿಲು ತೆಗೆಯಲು ನೋಡಿದರೆ ಲಾಕ್ ಆಗಿದೆ! ಒಳಗೆ ಅವರೊಡನೆ ಇದ್ದ ಅವನನ್ನು ಕೀ ಕೊಡಪ್ಪ ಎಂದು ಕೇಳಿದರೆ , "ಅಮ್ಮ, ಕೀಯನ್ನು ಬೆಕ್ಕು ಕಚ್ಚಿಕೊಂಡು ಹೋಯಿತು, ಕಾಗೆ ಎತ್ತಿಕೊಂಡು ಹೋಯಿತು" ಎಂದು ಅವನ ಧಾಟಿಯಲ್ಲೇ ಹೇಳಿದ್ದಾನೆ. ಅರ್ಧಗಂಟೆಗೂ ಹೆಚ್ಚು ಮುಂದುವರೆದಾಗ ರೋಸಿ ಹೋದ ನಮ್ಮಕ್ಕ ಎರಡು ಬಾರಿಸಿದ್ದಾಳೆ. ಅದರ ಪರಿಣಾಮ ಅವನ ಕಣ್ಣಿಂದ ನೀರು ಬಂತು ಹೊರತು ಉತ್ತರ ಬಂದಿಲ್ಲ. ನಂತರ ಅಕ್ಕ ಅಮ್ಮ ರೂಮ್ ತುಂಬಾ ಕೀ ಹುಡುಕಾಟದ ಕೆಲಸ.. ಪ್ರಯಾಸಪಟ್ಟು ಅಲ್ಲಿ ಇಲ್ಲಿ ಹುಡುಕಿದ್ದೇ ಹುಡುಕಿದ್ದು. ನಂತರ ಅವನು ಎಸೆದ ಕೀ ಅಲ್ಲಿಯೇ ಪಕ್ಕದ ಚೀಲದ ಒಂದು ಜೇಬಿನೊಳಗೆ ಹೋಗಿ ಬಿದ್ದಿತ್ತಂತೆ. ಆ ಪುಣ್ಯಾತ್ಮ ಅದರಲ್ಲಿ ಅದಿನ್ಯಾವ ರಿಸರ್ಚ್ ಮಾಡಲು ಹೋಗಿ ಅಲ್ಲಿಗೆ ಹಾಕಿದ್ದನೋ!

ಅದರ ಪರಿಣಾಮ ಈಗ ಹ್ಯಾಗಿದೆ ಅಂದರೆ ನಮ್ಮಕ್ಕ ಇಂದು ಬರುತ್ತೇನೆ ಎಂದರೆ ನಮ್ಮಮ್ಮ ಎಲ್ಲಾ ಕೀಗಳನ್ನು ತೆಗೆದು ಅವನ ಕೈಗೆ ಸಿಗದ ಹಾಗೆ ಮತ್ತು ಎಲ್ಲ ಬಾಗಿಲುಗಳ ಮೇಲಿನ ಚಿಲಕಗಳನ್ನು ಎತ್ತರಿಸಿ ಬಾಗಿಲುಗಳು ಹಾಕದ ಹಾಗೆ ಮಾಡಿಟ್ಟಿರುತ್ತಾರೆ. ಇದು ಅವನ ಕೀ ರಿಸರ್ಚ್ ನ ಫಲದಿಂದ ನಮ್ಮಮ್ಮ ಕಂಡುಕೊಂಡಿರುವ ಯಶಸ್ವಿ ಉತ್ತರ. ಯಾರಿಗೆ ಗೊತ್ತು ಅವನ ಆ ಪುಟ್ಟ ತಲೆಯಲ್ಲ್ಲಿ ಇನ್ನು ಅದಿನ್ಯಾವ experiment ಮೂಡುತ್ತಾ ಇದೆಯೋ..!

ಮುಂಜಾನೆಯ ಕ್ಯಾಬ್ ಕಥೆಗಳು

ಬೆಳಗ್ಗೆ 4:15ಕ್ಕೆ ನನ್ನ ಫೋನ್ ಅಲಾರ್ಮ್ ಹೊಡೆದುಕೊಂಡಿದ್ದು ನೋಡಿ ತತ್ ಈ ಟೆಕ್ನಾಲಜಿಯವರು ಮೊಬೈಲ್ ನಲ್ಲಿ ಅಲಾರ್ಮ್ ಯಾಕೆ ಇಟ್ಟಿದ್ದಾರೋ ಮೊದಲಾಗಿದ್ದರೆ ಟರ್ರ್.... ಎಂದು 5 ನಿಮಿಷ ಅನ್ನುವ ಹಳೇ ಗಡಿಯಾರ, ಆದರೆ ಈ ಬಡ್ಡೀಮಗಂದು ಮೊಬೈಲ್ ನಲ್ಲಿಯ ಅಲಾರ್ಮ್ ಮತ್ತೆ 10 ನಿಮಿಷಕ್ಕೆ ಹೊಡೆದುಕೊಳ್ಳುತ್ತದೆ. ಮುಂದೆ ಏನು , ಈಗಲೇ ಇದು ದೇಹದ ಒಂದು ಅಂಗವಾದಂತಿದೆ.

ಸರಿ, ಎದ್ದು ದೀಪ ಹಾಕಿ ನನ್ನ ಪಕ್ಕದಲ್ಲಿ ಮಲಗಿದ್ದ ನನ್ನ ರೂಂ ಮೇಟ್ ಕಡೆ ನೋಡಿದೆ. ಏನೋ ಸುಖವಾಗಿ ನಿದ್ದೆ ಮಾಡಿದ್ದಿಯಲ್ಲಾ ಎಂದು ಗೊಣಗುತ್ತಾ ನಿತ್ಯಕರ್ಮಗಳನ್ನು ಮುಗಿಸಲು ಹೋದೆ. ಎಂದಿನಂತೆ ತಯಾರಾಗಿ ನನಗಾಗಿ ಕಾದಿರುವ ಕ್ಯಾಬ್ ನ ಹತ್ತಿರ ಹೋದೆ. ಕ್ಯಾಬ್ ಕೂಡ ನನ್ನನ್ನು ವಿಚಿತ್ರ ದೃಷ್ಟಿಯಲ್ಲಿ ನೋಡಿದಂತಾಯಿತು. ಏನು ಐ.ಟಿ. ಜನರಪ್ಪ, ಒಳ್ಳೆ ಯುದ್ಧ ಮಾಡುವ ತರಹ ಬೆಳಗ್ಗೆ ಬೆಳಗ್ಗೆ ನಮಗೂ ಹಿಂಸೆ ಕೊಡುತ್ತಾರೆ ಅನ್ನುವಂತಿತ್ತು. ಇದಕ್ಕೂ ಚಳಿಯಾಗಿರಬೇಕು ಅನ್ನಿಸಿ ನಾ ಬೆಚ್ಚಗೆ ಒಳಗೆ ಕುಳಿತೆ. ಎಂದಿನಂತೆ ನನ ಕ್ಯಾಬ್ ಡೈವರ್ ನ ಉಭಯ ಕುಶಲೋಪರಿ ಸಾಂಪ್ರತ. ನನಗೆ ಒಳ್ಳೆ ನಿದ್ದೆ ಬರುತ್ತಿದ್ದರೂ ಮುಂದೆ ಕೂಡುವ ನಾನು ನಿದ್ದೆಯನ್ನು ಕಣ್ಣಂಚಿನಲ್ಲಿ ತಡೆ ತಡೆದು, ನಿದ್ದೆಗೂ, ಕಣ್ಣಿಗೂ ಯುದ್ಧ ಮಾಡಾಲು ಬಿಟ್ಟೆ. ಈ ಘಟಾನೆ ನಡೆಯದಿದ್ದರೆ ನಿದ್ದೆಯೇ ಗೆದ್ದು ಬಿಡುತ್ತಿತ್ತೇನೋ! ನಮ್ಮ ಕ್ಯಾಬ್ ಡ್ರೈವರ್ ನದು ನನ್ನದೇ ಪರಿಸ್ಥಿತಿ. ಆದರೆ ಅವನ ವಿಷಯದಲ್ಲಿ ನಿದ್ದೆಯೇ ಗೆಲ್ಲುತ್ತಿತ್ತು.

ಅವನು ಸಿಗ್ನಲ್ ಗೆ ಬ್ರೇಕ್ ಹಾಕುತ್ತಲೂ, ಹಂಪ್ ಗಳಿಗೆ ಹಾರ್ನ್ ಮಾಡುತ್ತಲೂ, ಓ ಇವತ್ತು ನಾನು ಕಣ್ಣೂ ಮುಚ್ಚಿದರೆ ಇವನು ನನಗೆ ಶಾಶ್ವತವಾಗಿ ಕಣ್ಣು ಮುಚ್ಚಿಸಿ ಹೊಗೆ ಹಾಕಿಸುತ್ತಾನೆ ಎಂದು ನಿದ್ದೆಯನ್ನು ಕೊಂದು ಎಚ್ಚರವಾದೆ. ಆದರೆ ನಿದ್ದೆಯನ್ನು ಗೆಲ್ಲಿಸಿದ ನಮ್ಮ ಡ್ರೈವರ್ ನೋಡ ನೋಡುತ್ತಿದ್ದಂತೆಯೆ ರೈಲು ಬಿಡುತ್ತೀವೆಂದು ಮೆಟ್ರೋ ಕಾಮಗಾರಿಗೆ ಹಾಕಿದ್ದ ತಗಡಿನ ತುದಿಗೆ ಕ್ಯಾಬ್ ಮೂತಿಯನ್ನು ಮುದ್ದಿಸಿದ್ದ. ಆದರೆ ತಗಡಿನ ತುದಿ ಸಣ್ಣದಾಗಿದ್ದರಿಂದ ಏನೂ ಅಪಾಯವಾಗಲಿಲ್ಲ.

ಕ್ಯಾಬ್ ನಿಂದ ಇಳಿದು ಬರುವಾಗ ಅದರ ಮೂತಿ ಲಕ್ಷ್ಮಣ ಮೂಗು ಕೊಯ್ದ ರಾವಣನ ತಂಗಿ ಶೂರ್ಪನಕಿಯಂತೆ ಕಾಣುತ್ತಿತ್ತು. ಅದಕ್ಕೆ ಮೃದುವಾಗಿ ಹಸ್ತಸ್ಪರ್ಶ ಮಾಡಿ ಈಗ ಇದಕ್ಕೆ ಬೆಚ್ಚಗಾಗಿರಬೇಕು ಎಂದು ನಾನು ಆಫೀಸಿನ ಕಡೆ ಹೊರಟೆ.

Tuesday, February 2, 2010

ಬೀದಿನಾಟಕ

ಬೀದಿ ನಾಟಕ ನಾಳೆ ಇದೆ ಎಂದು ನನ್ನ ಸ್ನೇಹಿತರಿಗೆ ಹೇಳೀದ್ದೆ. ಅವರು ಯಾವುದು ವಿಷಯ, ಏತಕ್ಕಾಗಿ ಅದಕ್ಕೆ ಬೀದಿನಾಟಕ ಅನ್ನುತ್ತಾರೆ ಎಂದು ಕೇಳಿದರು. ನನಗೆ ತಿಳಿದ್ದಿದ್ದಷ್ಟರ ಮಟ್ಟಿಗೆ ನಾ ಹೇಳಿದೆ. ನಂತರ ಅಯ್ಯೋ ಬೀದಿನಾಟಕವನ್ನು ನಾನು ನೋಡಿದ್ದೀನಲ್ಲ ಎಂದು ನನ್ನ ಶಿವಮೊಗ್ಗೆಯ ಕಾಲೇಜು ದಿನಗಳತ್ತ ನನ್ನ ಮನಸ್ಸು ಹಿಂದೆ ಚಲಿಸಿತು.

ಒಂದು ದಶಕದ ಹಿಂದೆ ಈಗಿನ ಜಾಗತೀಕರಣ, ಖಾಸಗೀಕರಣದ ಆರಂಭದ ಅಥವಾ ಅದರ ಮಧ್ಯದ ಅವಧಿ. ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್ ರವರು GATT ಒಪ್ಪಂದಕ್ಕೆ ಸಹಿ ಮಾಡಿದ್ದರು. ಅದರ ಪೂರಕವಾದ ಮಾಹಿತಿಗಳೂ ಟೀವಿಯಲ್ಲೂ ಅದರ ವಿರುದ್ಧವಾದ ಚಳುವಳಿಗನ್ನು ಎ.ಬಿ.ವಿ.ಪಿ, ಎನ್.ಎಸ್.ಎಸ್.ಐ.ಯು. ನಂತಹ ಸಂಘಟನೆಗಳು ನಮ್ಮ ಕಾಲೇಜು ಆವರಣದಲ್ಲಿ ಬೀದಿನಾಟಕದ ಮೂಲಕ ತಿಳಿಸುತ್ತಿದ್ದರು. ಆಗಿನ ನಮ್ಮ ಜ್ಞಾನ ಮಟ್ಟದಲ್ಲಿ ಬೀದಿನಾಟಕದ ಪ್ರದರ್ಶನದಲ್ಲಿ ಅಥವಾ ನಮ್ಮ ಮುಂದಿನ ವಿದ್ಯಾಭ್ಯಾಸದ ಗಮನದಲ್ಲಿ ಈ ಗ್ಯಾಟ್, ಜಾಗತೀಕರಣ ಎಲ್ಲಾ ಏನೂ ತಿಳಿಯಲಿಲ್ಲ.

ಆದರೂ ಬೀದಿನಾಟಕದಲ್ಲಿ ಏನೋ ಒಂದು ಸಮಾಜಮುಖಿ ಸಂದೇಶವಿದೆ ಅನ್ನಿಸುತ್ತಿತ್ತು. ಅನಂತರ ವಿದ್ಯಾಭ್ಯಾಸದ ಅವಧಿಯಲ್ಲಿ ಎಲ್ಲ ಕುರಿಗಳಂತೆ ನಾನೂ ಒಂದು ಕುರಿಯಾಗಿ ಎಂಜಿನಿಯರಿಂಗ್ ಪದವಿ ಪಡೆದು ಕೆಲಸಕ್ಕೆ ಸೇರಿದೆ. ಕೆಲಸಕ್ಕೆ ಸೇರಿದ ಆರಂಭದ ದಿನಗಳು ಐ.ಟಿ.ಯ ವ್ಯಾಮೋಹ ನನ್ನ ಜೀವನ ದೃಷ್ಟಿಯನ್ನು ಹಣಕ್ಕಾಗಿ ಮಾನವೀಯತೆಯನ್ನು ಮರೆಯುವ ಜನರನ್ನು, ನಾವು ಬದುಕುತ್ತಿರುವ ರೀತಿಯನ್ನು ನಮ್ಮ ಸ್ನೇಹಿತರ ಜೊತೆ ವ್ಯಂಗ್ಯ ಮಾಡುವಂತಾಯಿತು. ಯಾವುದೋ ಮಾಯಾಮೃಗವನ್ನು ಹಿಡಿಯಲು ಓಡುತ್ತಿರುವ ಜನ ನಾ ಮೊದಲು, ನಾ ಮೊದಲು ಎಂದು ವೃತ್ತಾಕಾರದಲ್ಲಿ ಯಾವ ಮುಖವನ್ನೂ ನೋಡಾದೆ ಬರಿ ಬೆನ್ನನ್ನೆ ನೋಡಿ ಭರವಸೆಯಲ್ಲಿ ಮುಂದುವರೆದ ಓಟ. ಯಾರಿಗೂ ಹಿಂದಿರುಗಿ ನನ್ನ ಪ್ರಯಾಣ ಸರಿಯಾಗಿದೆಯೇ ಎಂದು ಕೇಳುವಷ್ಟು , ಯೋಚಿಸುವಷ್ಟು ಸಮಯವಿಲ್ಲ. ಒಂದು ವಿಪರ್ಯಾಸವೆಂದರೆ ಯಾವ ಜಾಗತೀಕರಣದ ಬಗ್ಗೆ ಒಂದು ಅಸ್ಪಷ್ಟವಾದ ವಿರೋಧಿ ನಿಲುವಿತ್ತೋ ಅದೇ ನೀರಿನಲ್ಲಿ ಬೆಳೆದ ಭತ್ತದ ಅನ್ನವನ್ನು ಉಣ್ಣುತ್ತಿರುವುದು.

ಮತ್ತೆ ಬೀದಿ ನಾಟಕದ ಮುಖಾಂತರ ಈ ವಿಷಯಗಳು ನನ್ನ ಮನಸಿಗೆ ಬಂದಿದ್ದು ಎಷ್ಟು ಚಿತ್ರವಿಚಿತ್ರ ಬದುಕು, ಇಷ್ಟವಿಲ್ಲದ್ದನ್ನು ಅಪ್ಪಿಕೊಂಡದ್ದು ನಂತರ ಅದನ್ನೇ ಒಪ್ಪಿಕೊಂಡದ್ದು.

Tuesday, September 16, 2008

ಮಳೆರಾಯ



ಮುಂಗಾರು ಮಳೆಯೇ ಏನೋ ನಿನ್ನ ಹನಿಗಳ ಲೀಲೆ ... ಹಾಡಿನ ಸಾಲುಗಳ್ಳನ್ನು ಕೇಳುತಿದರೆ .ಹೌದಲ್ಲ ಮಳೆಯೇ ಏನು ನಿನ್ನ ಹನಿಗಳ ಲೀಲೆ ....ನೀನು ಕೊಪದಿಂದ ರಚ್ಚೆ ಹಿಡಿದ ಮಗುವನಂತೆ ,ಮುನಿದರು ಕಷ್ಟ ಪ್ರೀತಿ ಜಾಸ್ತಿಯಾಗಿ ಒಲೆದರು ಕಷ್ಟ.....ಆಬ್ಬ!!.ಏನು ನಿನ್ನ ಹೊಲೀಕೆಗಳು ,ನಮದೆಯಗಳು ಅದರಲ್ಲೂ ಪತ್ರಿಕೆಯ ಮುಖಪುಟ ಸುದ್ದಿಯಲ್ಲೂ ನೀನಗೆ ಸಿಂಹಪಾಲು .ಮುನಿದ ಮಳೆರಾಯ ,ವರುಣ ಅವಕೃಪೆಗೆ ನಾಡು ತತ್ತರ,ಮಳೆಯ ಆರ್ಭಟ ಜೊತೆಗೆ ನಿನ್ನ ಅಬ್ಬರಕೆ ಸಾವಿನ ಸುದ್ದಿಯ gift. ಜಾಸ್ತಿಕೃಪೆ ತೋರಿದರು ಅವಕ್ರಿಪೆಯೆಮ್ಬ ಹಣೆ ಪಟ್ಟಿ.ರೈತಾಪಿ ಜನರ ಬದುಕಿನಲ್ಲಿ ನಿನಗೆ ಅಶ್ವಿನಿ,ಬರಣಿ, ಕ್ರಿಥಿಕ ಒಂದೊಂದು ಮಳೆಗೂ ಒಂದೋಂದು ಬೆಳೆ ಯಂತೆ..ನೀನು ಕೈ ಕೊಟ್ಟರೆ ಅವರ ಬದುಕು ಕಷ,ಕಷ್ಟ.ಆದರೆ ನೀನು ನಿನ್ನ ಹುಚ್ಚು ಪ್ರೀತಿಯನ್ನು ಸದಾ ತೋರಿಸುತ್ತ್ತಿ .


ಎಲ್ಲೋಬಿದ್ದ ಮಳೆಗೆ ನದಿ ಕೆಂಪಾಗುವಾಂತೆ ನಿನ್ನ ನೆನಪಿಗೆ ನನ್ನ ಕೆನ್ನೆ ಕೆಂಪುಅಯ್ತು ಎಂದು ಪ್ರೇಯಸಿ ಹೇಳುವಂಥೆ ಪ್ರಿತಿಗೂ ನೀನೇನು ಬೇಕು.ಮೊದಲಮಳೆಯಲ್ಲಿ ಸಿಕ್ಕಿ ಮೊದಲ ಸಿಹಿ ಮುತ್ತು ಸಿಕ್ಕಿತಂತೆ ಎಂದೋ ಯಾರೋ ಬರದೆ ಕವನ ಓದಿದರೆ ತೋಯ್ದ ಮಳೆಯ ಚಳಿಯಲ್ಲೂ ಬಿಸಿಯಾಗುವುದು.ನಿನ್ನ ಆರ್ಭಟಕೆ ನನ್ನ ಊರಿನ ಹಳ್ಳ ಮೈತುಂಬಿ ಹರಿದು ದಾಟಲಾಗದೆ ಆಗ್ಗಿದು, ಅದೇ ಆರ್ಭಟಕ್ಕ್ಕ್ಷೆ ಬೆಂಗಳೂರಿನ ಚರಂಡಿಗಳು ಮೈತುಂಬಿ ಹರಿದು ಟ್ರಾಫಿಕ್ ಜಾಮ್ ಆಗಿ ಬಸ್ಸಿನಲ್ಲಿ ಸಿಕ್ಕಿಹಾಕಿ ಕೊಂಡಿದ್ದು.ಮೊದಲ ಮಳೆಯೇ ಸುವಾಸನೆಯನ್ನು ಗ್ರಹಿಸೂಥ ಸೋತ ಸ್ನೇಹಿತನ ಬುಗುರಿಗೆ ಗುನ್ನ ಹೊಡೆದದ್ದು,ನಿನ್ನ ರಬಸದಿಂದ ಮದುವೆ ಮನೆಯ ಚಪ್ಪರ ಮುರಿದು ಬೀದ್ಧು . ಅಬ್ಬ ಏನೇನು ನಿನ್ನ ತುಂಟ ತನಗಳು . ಭೂಮಿ ಹೆಣ್ಣು ಆದರೆ ನೀನು ಗಂಡು .ಕಾಯ್ದು ಬಿಸಿಯಾದ ಭೂಮಿಗೆ ನಿನ್ನ ಸಂಗದಿಂದ ತಣ್ಣಗದಳಂತೆ ಎಂಥ ರೋಮಚನಕರಿ ಹೊಲೀಕೆ .


ಅಯ್ಯ ಮಳೆರಾಯ ನೀನು ಒಂದು ನಾಡಿನ ಅಬಿವೃದ್ದೀಯ ಸೇತುವೆಯಂತೆ .ನೀನಿಂದಲೇ ವಿದ್ಯುತ ,ನೀನಿಂದಲೇ ಹಸಿರು.ನೀನು ಮುನಿದರೆ .ಎಷ್ಟು ಕೋಟಿ ಯೊಜನೇಯಾದರು ಎಲ್ಲ ತೇಲಿಸಿಬೀಡುತ್ತ್ತಿಯ. ನಿನನ್ನು ಹಿಡಿಧೀಡುವುದರಲ್ಲಿ ಕೆಲವೇ ಕೆಲವು ಇಂಜಿನಿಯರುಗಳ ,ರಾಜರ ದೂರ ದೃಸ್ತಿ ನಾವು ಅಬಿವೃದ್ದೀಯ ಪಥದಲ್ಲಿ ಮುಂದೆ ಬಂದಿದ್ದೇವೆ.ಈಗ ನಿನಗೂ ಒಂದು MM unit ಕೊಟ್ಟು ನಿನ್ನನು ಆಳೆದು ನೀನೆ ತುಂಬುವ ಜಲಶಯಗಳ ಅಡಿಗಳನ್ನು ಲೆಕ್ಕ ಹಾಕ್ಕುಥ ಮುಂದಿನ ಬೆಳಕಿನ ದಿನಗಳನ್ನು ನೋಡುತ್ತ್ತೀದೆವೆ. ಹಾಗಂತ ನೀನು ಮುನಿಸಿಕೊಲ್ಲಬೇಡ ಮಹರಾಯ .ನೀನು ಮುನಿದರೆ ಮಗುವನಂತೆ ಮುನಿ, ಒಲಿದರೆ ಪ್ರೆಯಸೀಯಂತೆ ಒಲಿ ,ಆದರೆ ತದ್ವಿರುದ್ಢ ಮಾತ್ರ ಬೇಡ ತುಂಬ ಕಷ್ಟ,ಕಷ್ಟ.ಹಿಂಗರೋ ,ಮುಂಗರೋ ........ ಮಳೆಯೇ ಮಳೆಯೇ ಬರಲಿ ನಿನ್ನ ಮೆರವಣಿಗೆ...

Sunday, July 13, 2008

ಮಾವಿನ ಮರದ ನೆನಪಿನಲಿ

ಮಾವಿನ ಹಣ್ಣು ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ . ಹಣ್ಣುಗಳ ರಾಜ ಎಂದು ಸ್ಕೂಲ್ ನಲ್ಲಿ ಟೀಚರ್ ಹೇಳಿದ ನೆನಪು .ಸರಿ officeನಿಂದ ಬಸ್ನಲ್ಲಿ ಬರುತ್ತಾ 20ರೂ. ಎಂಬ Boardನೋಡಿ ನನ್ನ ನೆನಪುಗಳು ಹಾಗೆ ReverseGearಗೆ ಬಿತ್ತು.ನನ್ನ ಬಾಲ್ಯದಲ್ಲಿ ದಸರ ರಜ ಮತ್ತು ಬೇಸಿಗೆ ರಜ ಎಲ್ಲ ಕಳೆದದ್ದು ನನ್ನ ಹುಟ್ಟಿದ ಊರು..ನನ್ನ ಹಳ್ಳಿಯಲ್ಲಿ. ಬದುಕು ಮತ್ತು ಗ್ರಾಮೀಣ ಬದುಕು ಅಲ್ಲೆ ಸಿಕ್ಕಿದ್ದು ಅಂತ ಕೆಲವೊಮ್ಮೆ ಅನ್ನಿಸುತ್ತೆ.ನೆನಪಿನ ಬುತ್ತಿಯನ್ನು ಬೆಂಗಳೂರು Busy ಜೀವನದ್ದಲ್ಲಿ ಬಿಚ್ಚಿದ್ದು ಮಾವಿನ ಹಣ್ಣು. ನನ್ನ ಬಾಲ್ಯದದಿನಗಳು ನನ್ನ ಅಣ್ಣಂದಿರ ಜೊತೆ ನಿತ್ಯವೂ ಈಜಾಡಲು ಕಾರ್ಯಕ್ರಮ ಇದ್ದೇಇತ್ತು.

ಬೇಸಿಗೆ ಬೇರೆ ಆಗಿದ್ದರಿಂದ ಆ ಬಿಸಿಲಿನಲ್ಲಿ ಈಜಾಡಲು ಇನ್ನು ಮಜ .ಆ ಮಜ ತಪ್ಪಿಸಿಕೊಳ್ಳಬಾರದೆಂದು ಮನೆಯವರ ಕಣ್ಣು ತಪ್ಪಿಸಿ ಕಳ್ಳನ ತರ ಹೊಗುತ್ತಿದ್ದೆವು.ಈಜಲು ಹೋಗುವ ದಾರಿಯಲ್ಲಿ ಒಂದು ಮಾವಿನ ಮರ ಇತ್ತು.ಹಳ್ಳಿಯಲ್ಲಿ ವಿಶೇಷ ನಾಮದಿಂದ ಕರೆಯುವಂತೆ ಆ ಮರದ ಹೆಸರು ಕಾಳ್ಳಜ್ಜಿ ಮಾವಿನ ಮರ.ಆ ಮರದ ಹತ್ತಿರ ಬಂದರೆ ಊರ ಹತ್ತಿರ ಇದ್ದೆವಿ ಎಂದು ನಮ್ಮ ಅಣ್ಣದಿಂರು ಹೇಳುತಿದ್ದ ನೆನಪು. ಊರ ಹತ್ತಿರದ ಮರವಾದ್ದರಿಂದ ಊರವರ ಕಣ್ಣು ಆ ಮರದ ಮೇಲಿನ ಹಣ್ಣುಗಳ ಮೇಲೆ ಇತ್ತು.ಊರವರ ಕಣ್ಣು ಬಿದ್ದಿದೆ ಅಂದರೆ ನಮ್ಮಕಣ್ಣು ಬಿದ್ದಿರುವುದು ವಿಶೇಷ ಏನಲ್ಲ. ಆ ಮರದ ಹಣ್ಣುಗಳನ್ನು ಕೀಳಲು ಒಂದು ಮುಹೂರ್ತ ನಿಗದಿ ಮಾಡಿದೆವು. ಮಹೂರ್ತವೇನೊ ಒಳ್ಳೆಯದೆ , ಆದರೆ ಒಳ್ಳೆಯ ಮಹೂರ್ತಗಳೆಗೂ ಕಂಟಕಗಳಿರುವಂತೆ ಆ ಮರವನ್ನು ಊರ ಸಾಬರಿಗೆ ಗುತ್ತಿಗೆ ಕೊಟ್ಟಿದ್ದರು. ನಾನು ಚಿಕ್ಕವನಾದ್ದರಿಂದ ಮರದ ಕೆಳಗೆ ನಮ್ಮ ಅಣ್ಣ ಹಾಕುವ ಕಾಯನ್ನು Catchಹಿಡಿಯುವ ಕೆಲಸ .ಆ ಕೆಲಸದ ಜೊತೆ ನಾನು ನನ್ನ ಹೊಸ ಹವಾಯಿ ಚಪ್ಪಲಿ ಬೇರೆ ಹಾಕಿ ಹೋಗಿದ್ದೆ.ಮರದ ಮೇಲೆ ಹಣ್ಣನ್ನು ಮತ್ತು ಕೆಳಗೆ ನನ್ನ ಹೊಸ ಚಪ್ಪಲಿಯನ್ನು ನೋಡುವ ಕೆಲಸ.ಸುಮಾರು ಒಂದು ಮೂರು-ನಾಲ್ಕು ಹಣ್ಣು ಕೀತ್ತಿರಬಹುದು ನನ್ನ ಅಣ್ಣ ಮರದಿಂದ ಹಾರಿ "ಎಲ್ಲ ಓಡ್ರಲೆ ಸಾಬ್ರು ಬರ್ತವ್ರೆ "ಎಂದು ಅಲ್ಲಿಂದ ಎಲ್ಲಾರು ಓಡಿದರು.ಆ ಸಾಬರವನು ನನ್ನ ಕುತ್ತಿಗೆಗೆ ಕೈ ಹಾಕಬೇಕು ಅನ್ನುವಷ್ಟರಲ್ಲಿ ನಾನು ಪರಾರಿ.

ಆದ್ರೆ ದುಃಖಕ್ಕೆ ಕಾರಣವಾಗಿದ್ದು ಓದುವ ಭರದಲ್ಲಿ ನನ್ನ ಹೊಸ ಚಪ್ಪಲಿಯನ್ನು ಅಲ್ಲೇ ಬಿಟ್ಟು ಓದಿದ್ದು. ನನ್ನ ಅಣ್ಣಂದಿರಿಗೆ ತಪ್ಪಿಸಿಕೊಂಡದ್ದಕ್ಕೆ ಸಂತೋಷ , ನನಗೆ ನನ್ನ ಹೊಸ ಚಪ್ಪ್ಲಿ ಹೋಗಿದ್ದಕ್ಕೆ ದುಃಖ. ಹಿಂತಿರುಗಿ ತರುವಂತಿಲ್ಲ, ಮನೆಯಲ್ಲಿ ಕೇಳುವಂತಿಲ್ಲ. ಕೇಳಿದರೆ ನಮ್ಮ ಈಜಾಡುವ ಕೆಲಸಕೆ ಕತ್ತ್ರಿ ,ಅದೂ ..ಅಲ್ಲದೆ ಬೇರೆಯವರ ಮಾವಿನ ಮರ ಹತ್ತಿದ್ದಕೆ ಬೇರೆ ವದೆ ಬೀಳುವ ಭಯ. ನನ್ನ ದುಃಖಕ್ಕೆ ಮೊದಲ ಕಾರಣ ಆಗ ನಮಗೆ ಚಪ್ಪಲಿ ಹಾಕಿದರೇನೆ ದೊಡ್ಡ ಸಂಭ್ರಮ. ನನ್ನ ಹಳ್ಳಿಯಲ್ಲಿ ಚಪ್ಪಲಿ ಹಾಕದ ತುಂಬ ಹುಡಗರು. ಅವರ ಜೊತೆ ಚಪಲ್ಲಿ ಹಾಕುವನು ನಾನೆ. ಅದ್ದರಿಂದ ನನಗೆ ವಿಷೇಶ ಸ್ಥಾನವೆಂದು ನಾನು ಬಾವಿಸಿದ್ದೆ .ಚಪ್ಪಲಿ ಹೋದಾಗಿನಿಂದ ಮಂತ್ರಿ ಪಟ್ಟ ಹೋದ ಶಾಸಕನ ಥರ ನನ್ನ ಚಡಪದಿಕೆ ಮುಂದುವರೆದಿತ್ತು. ಯಾರ ಮನೆಗೆ ಹೋದರು ಯಾರ ಕಾಲನ್ನು ನೋಡಿದರು ನನ್ನ ಚಪ್ಪ್ಲಿ ಇರಬಹುದೆ ಎಂಬ ಗುಮಾನಿ. ನಂತರ ನಾನು ಕೂಡ ಹುಡುಗರ ಜೊತೆ ಬರಿಕಾಲಿನಲ್ಲಿ ನನ್ನ ಬೇಸಿಗೆ ರಜ ಕಳೆದು ಅಯ್ತು. ನಂತರದ ಬೇಸಿಗೆ ರಜದಲ್ಲಿ ಅದೆ ಅಭ್ಯಾಸವಾಯಿತು. ಈ ನೆನಪು ಬಿಚ್ಚಿದ್ದು ಮಾವಿನ ಹಣ್ಣು ನೋಡಿದಾಗ ಮತ್ತು ಈಗ ನಾನು Brand ಎಂದು ಹಾಕಿರುವ ದುಬಾರಿ ಚಪ್ಪಲಿಯನ್ನು ನೊಡಿದಾಗ. ಮಾವಿನ ಹಣ್ಣು ಅತ್ತಂತೆ ಮತ್ತು ಈಗಿನ ದುಬಾರಿ ಬೆಲೆಯ ಚಪ್ಪ್ಲಿ ನನ್ನ ನೋಡಿ ನಕ್ಕಂತೆ ಭಾಸವಾಯ್ತು.