Tuesday, February 2, 2010

ಬೀದಿನಾಟಕ

ಬೀದಿ ನಾಟಕ ನಾಳೆ ಇದೆ ಎಂದು ನನ್ನ ಸ್ನೇಹಿತರಿಗೆ ಹೇಳೀದ್ದೆ. ಅವರು ಯಾವುದು ವಿಷಯ, ಏತಕ್ಕಾಗಿ ಅದಕ್ಕೆ ಬೀದಿನಾಟಕ ಅನ್ನುತ್ತಾರೆ ಎಂದು ಕೇಳಿದರು. ನನಗೆ ತಿಳಿದ್ದಿದ್ದಷ್ಟರ ಮಟ್ಟಿಗೆ ನಾ ಹೇಳಿದೆ. ನಂತರ ಅಯ್ಯೋ ಬೀದಿನಾಟಕವನ್ನು ನಾನು ನೋಡಿದ್ದೀನಲ್ಲ ಎಂದು ನನ್ನ ಶಿವಮೊಗ್ಗೆಯ ಕಾಲೇಜು ದಿನಗಳತ್ತ ನನ್ನ ಮನಸ್ಸು ಹಿಂದೆ ಚಲಿಸಿತು.

ಒಂದು ದಶಕದ ಹಿಂದೆ ಈಗಿನ ಜಾಗತೀಕರಣ, ಖಾಸಗೀಕರಣದ ಆರಂಭದ ಅಥವಾ ಅದರ ಮಧ್ಯದ ಅವಧಿ. ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್ ರವರು GATT ಒಪ್ಪಂದಕ್ಕೆ ಸಹಿ ಮಾಡಿದ್ದರು. ಅದರ ಪೂರಕವಾದ ಮಾಹಿತಿಗಳೂ ಟೀವಿಯಲ್ಲೂ ಅದರ ವಿರುದ್ಧವಾದ ಚಳುವಳಿಗನ್ನು ಎ.ಬಿ.ವಿ.ಪಿ, ಎನ್.ಎಸ್.ಎಸ್.ಐ.ಯು. ನಂತಹ ಸಂಘಟನೆಗಳು ನಮ್ಮ ಕಾಲೇಜು ಆವರಣದಲ್ಲಿ ಬೀದಿನಾಟಕದ ಮೂಲಕ ತಿಳಿಸುತ್ತಿದ್ದರು. ಆಗಿನ ನಮ್ಮ ಜ್ಞಾನ ಮಟ್ಟದಲ್ಲಿ ಬೀದಿನಾಟಕದ ಪ್ರದರ್ಶನದಲ್ಲಿ ಅಥವಾ ನಮ್ಮ ಮುಂದಿನ ವಿದ್ಯಾಭ್ಯಾಸದ ಗಮನದಲ್ಲಿ ಈ ಗ್ಯಾಟ್, ಜಾಗತೀಕರಣ ಎಲ್ಲಾ ಏನೂ ತಿಳಿಯಲಿಲ್ಲ.

ಆದರೂ ಬೀದಿನಾಟಕದಲ್ಲಿ ಏನೋ ಒಂದು ಸಮಾಜಮುಖಿ ಸಂದೇಶವಿದೆ ಅನ್ನಿಸುತ್ತಿತ್ತು. ಅನಂತರ ವಿದ್ಯಾಭ್ಯಾಸದ ಅವಧಿಯಲ್ಲಿ ಎಲ್ಲ ಕುರಿಗಳಂತೆ ನಾನೂ ಒಂದು ಕುರಿಯಾಗಿ ಎಂಜಿನಿಯರಿಂಗ್ ಪದವಿ ಪಡೆದು ಕೆಲಸಕ್ಕೆ ಸೇರಿದೆ. ಕೆಲಸಕ್ಕೆ ಸೇರಿದ ಆರಂಭದ ದಿನಗಳು ಐ.ಟಿ.ಯ ವ್ಯಾಮೋಹ ನನ್ನ ಜೀವನ ದೃಷ್ಟಿಯನ್ನು ಹಣಕ್ಕಾಗಿ ಮಾನವೀಯತೆಯನ್ನು ಮರೆಯುವ ಜನರನ್ನು, ನಾವು ಬದುಕುತ್ತಿರುವ ರೀತಿಯನ್ನು ನಮ್ಮ ಸ್ನೇಹಿತರ ಜೊತೆ ವ್ಯಂಗ್ಯ ಮಾಡುವಂತಾಯಿತು. ಯಾವುದೋ ಮಾಯಾಮೃಗವನ್ನು ಹಿಡಿಯಲು ಓಡುತ್ತಿರುವ ಜನ ನಾ ಮೊದಲು, ನಾ ಮೊದಲು ಎಂದು ವೃತ್ತಾಕಾರದಲ್ಲಿ ಯಾವ ಮುಖವನ್ನೂ ನೋಡಾದೆ ಬರಿ ಬೆನ್ನನ್ನೆ ನೋಡಿ ಭರವಸೆಯಲ್ಲಿ ಮುಂದುವರೆದ ಓಟ. ಯಾರಿಗೂ ಹಿಂದಿರುಗಿ ನನ್ನ ಪ್ರಯಾಣ ಸರಿಯಾಗಿದೆಯೇ ಎಂದು ಕೇಳುವಷ್ಟು , ಯೋಚಿಸುವಷ್ಟು ಸಮಯವಿಲ್ಲ. ಒಂದು ವಿಪರ್ಯಾಸವೆಂದರೆ ಯಾವ ಜಾಗತೀಕರಣದ ಬಗ್ಗೆ ಒಂದು ಅಸ್ಪಷ್ಟವಾದ ವಿರೋಧಿ ನಿಲುವಿತ್ತೋ ಅದೇ ನೀರಿನಲ್ಲಿ ಬೆಳೆದ ಭತ್ತದ ಅನ್ನವನ್ನು ಉಣ್ಣುತ್ತಿರುವುದು.

ಮತ್ತೆ ಬೀದಿ ನಾಟಕದ ಮುಖಾಂತರ ಈ ವಿಷಯಗಳು ನನ್ನ ಮನಸಿಗೆ ಬಂದಿದ್ದು ಎಷ್ಟು ಚಿತ್ರವಿಚಿತ್ರ ಬದುಕು, ಇಷ್ಟವಿಲ್ಲದ್ದನ್ನು ಅಪ್ಪಿಕೊಂಡದ್ದು ನಂತರ ಅದನ್ನೇ ಒಪ್ಪಿಕೊಂಡದ್ದು.

No comments: