ನನ್ನ ಅಕ್ಕನ ಮಗ ಬಹಳ ತುಂಟ. ಅಕ್ಕನ ಮನೆ ಹತ್ತಿರದಲ್ಲಿರುವುದರಿಂದ ಅವಳಿಗೆ ಬೇಜಾರಾದಾಗ ಅಥವಾ ಮಗನಿಗೆ ರಜಾ ಸಿಕ್ಕಿದಾಗ ನಮ್ಮ ಮನೆಗೆ ಬರುವುದು ರೂಢಿ. ಅವನು ನಮ್ಮ ಮನೆಗೆ ಬಂದರೆ ನಮ್ಮಮ್ಮನಿಗೆ ಪ್ರಾಣಸಂಕಟ. ಯಾಕೆಂದರೆ ಅಡುಗೆಮನೆಯ ಚಮಚ ತಟ್ಟೆಯಿಂದ ಹಿಡಿದು ಮನೆಯ ಟಿ.ವಿ.ರಿಮೋಟ್, ಕೊನೆಗೆ ನಮ್ಮಪ್ಪನ ಮೊಬೈಲ್ ಫೋನ್ ಕೂಡ ಅವನ ವಿಜ್ಞಾನಿಯಂತಹ ತಲೆಗೆ ಆಟಿಕೆ ವಸ್ತುಗಳಾಗಿ ಎಲ್ಲವನ್ನೂ ಬಿಚ್ಚಿ, ಬಿಡಿಸಿ, ಕೂಡಿಸಿ, ಕಳೆದು, ಉಲ್ಟಾ ಸೀದಾ ಹೀಗೆ ಅವನ ಆ ತಲೆಗೆ ಏನೇನು ಬರುವುದು ಯಾವುದರಲ್ಲಿ ಅವನಿಗೆ ಅದಿನ್ಯಾವ ಮಾಹಿತಿ ಸಿಗುವುದೋ ನಾ ಕಾಣೆ.
ಆದರೆ ಪಾಪ ಸುಖಾಸುಮ್ಮನೆ ಬಲಿಪಶುಗಳಾಗುವುದು ನಮ್ಮ ಮನೆಯ ವಸ್ತುಗಳು. ನನಗೂ ಅವನಿಗೂ ಏನೋ ಒಂದು ತರಹ ಜುಗಲ್ಬಂದಿ. ಅವನ ಕಾರ್ಯ ಚಟುವಟಿಕೆಗಳನ್ನು ನಾನು ಪ್ರೋತ್ಸಾಹಿಸುವುದು. ನಂತರ ಅವನನ್ನು ಕಂಟ್ರೋಲ್ ಮಾಡಲು ಆಗುವುದಿಲ್ಲವೆಂದು ನನ್ನಕ್ಕನ ತಕರಾರು . ಅವಳ ಈ ವಾದವನ್ನು ನಾನು ಮತ್ತು ಅವನು ಬೈಕ್ ನಲ್ಲಿ ಸುತ್ತುತ್ತಾ ಅವನಿಗೆ ಕೇಳಿದ್ದನ್ನೆಲ್ಲಾ ನಾನು ಕೋಡಿಸುತ್ತಾ.. ತಿನ್ನಿಸುತ್ತಾ ಬೇಕಾದ ಸಾಕ್ಷ್ಯಾಧಾರಗಳನ್ನು ಒದಗಿಸುತ್ತೇವೆ. ಆದರೆ ಕೆಲವೊಮ್ಮೆ ಅವನು ಈಗಿನ ಪಳಗಿದ ರಾಜಕಾರಣಿಗಳಂಅಹ ನನ್ನ ಈ ಒಳ್ಳೆತನವನ್ನು misuse ಮಾಡಿಕೊಂಡದ್ದು ಉಂಟು. ಆಗ ಅವನಿಗೆ ನನ್ನಕ್ಕನಿಂದ ಪಟೀರ್ ಎಂದು ಹೊಡೆತ. As usual ಸಮಾಧಾನ ಮಾಡಲು ಅವನ್ನಜ್ಜನ ಸನ್ನಿಧಾನ. ಕೆಲವೊಮ್ಮೆ ಆತ ಮಾಡುವ ತುಂಟಾಟಗಳು ಎಷ್ಟು ಅತಿರೇತಕ್ಕೆ ಹೋಗುತ್ತೆಂದರೆ ಒಂದು ಸಾರಿ ನಮ್ಮಮ್ಮ , ಅಕ್ಕ ರೂಮ್ ನಲ್ಲಿ ಏನೋ ಮಾತಾಡುತ್ತಾ ಕುಳಿತಿದ್ದಾರೆ. ರೂಮಿನ ಒಳಗೆ ಅವರ ಜೊತೆ ಆಟವಾಡುತ್ತಾ ಇದ್ದವನು ರೂಮ್ ಬಾಗಿಲನ್ನು ಹಾಕಿಕೊಂಡು ಅವನ ಕೈಗೆ ಸಿಗುವ ರೂಮ್ ಕೀಯನ್ನು ಹಾಕಿ ಎಲ್ಲೋ ಎಸೆದಿದ್ದಾನೆ. ಇದ್ಯಾವುದರ ಪರಿವೆ ಇಲ್ಲದ ನಮ್ಮಕ್ಕ, ನಮ್ಮಮ್ಮ ಮಾತು ಮುಗಿಸಿ ಹೊರಗೆ ಬರಲು ಬಾಗಿಲು ತೆಗೆಯಲು ನೋಡಿದರೆ ಲಾಕ್ ಆಗಿದೆ! ಒಳಗೆ ಅವರೊಡನೆ ಇದ್ದ ಅವನನ್ನು ಕೀ ಕೊಡಪ್ಪ ಎಂದು ಕೇಳಿದರೆ , "ಅಮ್ಮ, ಕೀಯನ್ನು ಬೆಕ್ಕು ಕಚ್ಚಿಕೊಂಡು ಹೋಯಿತು, ಕಾಗೆ ಎತ್ತಿಕೊಂಡು ಹೋಯಿತು" ಎಂದು ಅವನ ಧಾಟಿಯಲ್ಲೇ ಹೇಳಿದ್ದಾನೆ. ಅರ್ಧಗಂಟೆಗೂ ಹೆಚ್ಚು ಮುಂದುವರೆದಾಗ ರೋಸಿ ಹೋದ ನಮ್ಮಕ್ಕ ಎರಡು ಬಾರಿಸಿದ್ದಾಳೆ. ಅದರ ಪರಿಣಾಮ ಅವನ ಕಣ್ಣಿಂದ ನೀರು ಬಂತು ಹೊರತು ಉತ್ತರ ಬಂದಿಲ್ಲ. ನಂತರ ಅಕ್ಕ ಅಮ್ಮ ರೂಮ್ ತುಂಬಾ ಕೀ ಹುಡುಕಾಟದ ಕೆಲಸ.. ಪ್ರಯಾಸಪಟ್ಟು ಅಲ್ಲಿ ಇಲ್ಲಿ ಹುಡುಕಿದ್ದೇ ಹುಡುಕಿದ್ದು. ನಂತರ ಅವನು ಎಸೆದ ಕೀ ಅಲ್ಲಿಯೇ ಪಕ್ಕದ ಚೀಲದ ಒಂದು ಜೇಬಿನೊಳಗೆ ಹೋಗಿ ಬಿದ್ದಿತ್ತಂತೆ. ಆ ಪುಣ್ಯಾತ್ಮ ಅದರಲ್ಲಿ ಅದಿನ್ಯಾವ ರಿಸರ್ಚ್ ಮಾಡಲು ಹೋಗಿ ಅಲ್ಲಿಗೆ ಹಾಕಿದ್ದನೋ!
ಅದರ ಪರಿಣಾಮ ಈಗ ಹ್ಯಾಗಿದೆ ಅಂದರೆ ನಮ್ಮಕ್ಕ ಇಂದು ಬರುತ್ತೇನೆ ಎಂದರೆ ನಮ್ಮಮ್ಮ ಎಲ್ಲಾ ಕೀಗಳನ್ನು ತೆಗೆದು ಅವನ ಕೈಗೆ ಸಿಗದ ಹಾಗೆ ಮತ್ತು ಎಲ್ಲ ಬಾಗಿಲುಗಳ ಮೇಲಿನ ಚಿಲಕಗಳನ್ನು ಎತ್ತರಿಸಿ ಬಾಗಿಲುಗಳು ಹಾಕದ ಹಾಗೆ ಮಾಡಿಟ್ಟಿರುತ್ತಾರೆ. ಇದು ಅವನ ಕೀ ರಿಸರ್ಚ್ ನ ಫಲದಿಂದ ನಮ್ಮಮ್ಮ ಕಂಡುಕೊಂಡಿರುವ ಯಶಸ್ವಿ ಉತ್ತರ. ಯಾರಿಗೆ ಗೊತ್ತು ಅವನ ಆ ಪುಟ್ಟ ತಲೆಯಲ್ಲ್ಲಿ ಇನ್ನು ಅದಿನ್ಯಾವ experiment ಮೂಡುತ್ತಾ ಇದೆಯೋ..!
ಮುಕ್ತ
11 months ago
No comments:
Post a Comment